ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾಗೆ ನೇಪಾಳ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸೀತೆಯ ಕುರಿತಾದ ಡೈಲಾಗ್ ಅನ್ನು ಪ್ರಶ್ನಿಸಿ ಕಠ್ಮಂಡು ಮೇಯರ್ ಬಲೇನ್ ಶಾ ಕೋರ್ಟ್ ಮೊರೆ ಹೋಗಿದ್ದರು. ಜೊತೆಗೆ ನೇಪಾಳದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಈ ಬ್ಯಾನ್ ಪ್ರಶ್ನಿಸಿ ಚಿತ್ರತಂಡ ಕೂಡ ಕೋರ್ಟ್ ಮೆಟ್ಟಿಲು ಏರಿತು.
ಆದಿಪುರುಷ ಸಿನಿಮಾ ಕುರಿತಾದ ಅರ್ಜಿಯನ್ನು ಕೈಗೆತ್ತಿಕೊಂಡ ನೇಪಾಳ ಹೈಕೋರ್ಟ್, ‘ಸಿನಿಮಾ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿಯು ಚಿತ್ರವನ್ನು ಒಪ್ಪಿಕೊಂಡ ಮೇಲೆ ಬ್ಯಾನ್ ಗೆ ಅರ್ಥವಿಲ್ಲ. ಹಾಗಾಗಿ ಬ್ಯಾನ್ ತೆರೆವುಗೊಳಿಸಿ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ನೇಪಾಳದಲ್ಲಿ ಆದಿಪುರುಷ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಆದರೆ, ಕೋರ್ಟ್ ತೀರ್ಪು ಏನೇ ಬಂದರೂ, ಸಿನಿಮಾ ಪ್ರದರ್ಶನಕ್ಕೆ ಬಿಡುವುದಿಲ್ಲ ಎಂದಿದ್ದಾರೆ ಬಲೇನ್ ಶಾ.
ಆದಿಪುರುಷ (Adi Purush) ಸಿನಿಮಾದಲ್ಲಿ ಸೀತೆಯನ್ನು ಭಾರತದ ಮಗಳು ಎಂದು ಕರೆದ ಡೈಲಾಗ್ ಕುರಿತಂತೆ ಕಠ್ಮಂಡು ಮೇಯರ್ ಈ ಹಿಂದೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ಸಿನಿಮಾದಲ್ಲಿ ಸುಳ್ಳು ಇತಿಹಾಸವನ್ನು ಹೇಳಿದ್ದಕ್ಕೆ ಚಿತ್ರವನ್ನು ಕಠ್ಮಂಡುವಿನಲ್ಲಿ ಬ್ಯಾನ್ ಮಾಡಿದ್ದರು. ಡೈಲಾಗ್ ತಗೆಯುವಂತೆ ಚಿತ್ರತಂಡಕ್ಕೆ ಹೇಳಿದ್ದರೂ ಡೈಲಾಗ್ ಅನ್ನು ತಗೆಯದೇ ಇರುವ ಕಾರಣಕ್ಕಾಗಿ ಕಠ್ಮಂಡು ಮೇಯರ್ ಸುತ್ತೋಲೆ ಹೊರಡಿಸಿದ್ದಾರೆ.
ಬರೀ ಆದಿಪುರುಷ ಸಿನಿಮಾ ಮಾತ್ರವಲ್ಲ, ಕಠ್ಮಂಡುನಲ್ಲಿ (Kathmandu) ಒಟ್ಟು 17 ಚಿತ್ರಮಂದಿರಗಳಿದ್ದು ಈ ಅಷ್ಟೂ ಚಿತ್ರಮಂದಿರಗಳಲ್ಲೂ ಭಾರತೀಯ ಸಿನಿಮಾಗಳನ್ನು ಪ್ರದರ್ಶನ ಮಾಡಬಾರದು ಎಂದು ಆದೇಶ ಹೊರಡಿಸಿರುವುದಾಗಿ ಮೇಯರ್ ಬಲೇನ್ ಶಾ (Balen Shah) ಟ್ವೀಟ್ ಮಾಡಿದ್ದರು. ಆದಿಪುರುಷ ಸಿನಿಮಾ ಸೇರಿದಂತೆ ಭಾರತದ ಅಷ್ಟೂ ಸಿನಿಮಾಗಳನ್ನೂ ಬ್ಯಾನ್ (Ban) ಮಾಡಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಓಂ ರಾವತ್ (Om Raut) ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಸೈಫ್‌ರನ್ನ ಮಾಡ್ರನ್ ರಾವಣನಂತೆ ತೋರಿಸಿರೋದು ಟ್ರೋಲ್ ಆಗುತ್ತಿದೆ. ಸಿನಿಮಾ ನೈಜವಾಗಿ ತೋರಿಸಿಲ್ಲ ಎಂದು ಟೀಕೆ ಮಾಡಿದ್ದಾರೆ.