ಒಂದೆಡೆ ‘ಆದಿಪುರುಷ್’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಇನ್ನೊಂದೆಡೆ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ನಿರ್ದೇಶಕ ಓಂ ರಾವತ್ ಅವರು ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರು ಅಂದುಕೊಂಡ ರೀತಿಯಲ್ಲಿ ಜನರು ಈ ಸಿನಿಮಾವನ್ನು ಸ್ವೀಕರಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕಾರಣಗಳಿಂದಾಗಿ ‘ಆದಿಪುರುಷ್’ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಲಾಗುತ್ತಿದೆ. ಅದರಲ್ಲೂ ರಾವಣನ ಪಾತ್ರದ ಬಗ್ಗೆ ಬಹಳ ಟೀಕೆ ವ್ಯಕ್ತವಾಗುತ್ತಿದೆ. ಸೈಫ್ ಅಲಿ ಖಾನ್ ಅವರು ಈ ಪಾತ್ರ ಮಾಡಿದ್ದಾರೆ. ಆದಿಪುರುಷ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೆಲವರು ತಕರಾರು ತೆಗೆದಿದ್ದಾರೆ. ಹಾಗಾಗಿ ಟ್ವಿಟರ್ನಲ್ಲಿ #BanAdipurushMovie ಎಂಬ ಹ್ಯಾಶ್ಟ್ಯಾಗ್ ಸಖತ್ ಟ್ರೆಂಡ್ ಆಗಿದೆ.
‘ಆದಿಪುರುಷ್’ ಸಿನಿಮಾದಲ್ಲಿ ಪ್ರಭಾಸ್ ಅವರು ರಾಮನಾಗಿ ನಟಿಸಿದ್ದರೆ, ಅವರ ಎದುರು ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅವರು ಆರ್ಭಟಿಸಿದ್ದಾರೆ. ಅವರ ಪಾತ್ರವನ್ನು ಇಟ್ಟುಕೊಂಡು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ರಾವಣನ ಗೆಟಪ್, ಆತ ನಡೆದುಕೊಳ್ಳುವ ರೀತಿ, ಪುಷ್ಪಕ ವಿಮಾನದ ಬದಲಿಗೆ ದೈತ್ಯಾಕಾರದ ಬಾವಲಿ ಬಳಕೆ ಆಗಿರುವುದು ಸೇರಿದಂತೆ ಅನೇಕ ಸಂಗತಿಗಳು ಟೀಕೆಗೆ ಒಳಗಾಗುತ್ತಿವೆ. ಇನ್ನೊಂದು ಪ್ರಮುಖ ಅಂಶ ಏನೆಂದರೆ ‘ಬ್ರಾಹ್ಮಣನಾದ ರಾವಣನು ಈ ಸಿನಿಮಾದಲ್ಲಿ ಮಾಂಸ ಏಕೆ ಮುಟ್ಟಿದ್ದಾನೆ’ ಎಂಬ ಪ್ರಶ್ನೆ ಎದುರಾಗಿದೆ.
ತಾನು ಸಾಕಿದ ದೈತ್ಯಾಕಾರದ ಬಾವಲಿಗೆ ರಾವಣನು ತನ್ನ ಕೈಯಾರೆ ಮಾಂಸ ತಿನ್ನಿಸುತ್ತಾನೆ. ಯಾವುದೋ ದೊಡ್ಡ ಪ್ರಾಣಿಯ ಹಸಿ ಮಾಂಸವನ್ನು ಆತ ಮುಟ್ಟುತ್ತಾನೆ. ಈ ದೃಶ್ಯದ ಬಗ್ಗೆ ಟೀಕೆ ಮಾಡಲಾಗುತ್ತಿದೆ. ಸಿನಿಮಾದಲ್ಲಿನ ಇನ್ನೂ ಅನೇಕ ದೃಶ್ಯಗಳಿಗೆ ತಕರಾರು ಎದುರಾಗಿದೆ. ಈ ಕಾರಣದಿಂದ ‘ಆದಿಪುರುಷ್’ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಒಂದು ವರ್ಗದ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಆಂಜನೇಯನ ಪಾತ್ರವನ್ನು ದೇವದತ್ತ ನಾಗೆ ಅವರು ನಿಭಾಯಿಸಿದ್ದಾರೆ. ಹನುಮಂತನ ಸಂಭಾಷಣೆಗಳು ತೀರಾ ಕಳಪೆ ಆಗಿವೆ ಎಂದು ಬಹುತೇಕರು ಟೀಕಿಸಿದ್ದಾರೆ. ಈ ಸಿನಿಮಾದಿಂದ ನಿರ್ದೇಶಕ ಓಂ ರಾವತ್ ಅವರು ಹಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ರಾಮಾಯಣವನ್ನು ತಪ್ಪಾಗಿ ಚಿತ್ರಿಸಿರುವುದಕ್ಕೆ ಇಡೀ ಚಿತ್ರತಂಡದವರು ಕ್ಷಮೆ ಕೇಳಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಈ ಸಮಯದಲ್ಲಿ ಪ್ರಭಾಸ್ ಅವರು ಮೌನಕ್ಕೆ ಶರಣಾಗಿದ್ದಾರೆ. ಅವರ ಮುಂಬರುವ ಸಿನಿಮಾಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.