ಭಾರತದಲ್ಲಿ ಮಂಚದ ಗಾಡಿ ಸಂಚಲನ, ಕ್ರಿಯಾತ್ಮಕ ಐಡಿಯಾಗೆ ಆನಂದ್ ಮಹೀಂಗ್ರ ಕ್ಲೀನ್ ಬೋಲ್ಡ್!

ಮುಂಬೈ(ಜೂ.14) ಭಾರತದಲ್ಲಿ ಕೆಲವು ಕ್ರಿಯಾತ್ಮಕ ಐಡಿಯಾಗಳು ಊಹೆಗೂ  ನಿಲುಕುವುದಿಲ್ಲ. ಕೈಗೆಟುವ ವಸ್ತುಗಳಿಂದ ತಮ್ಮ ಬಳಕೆಗೆ, ದಿನನಿತ್ಯದ ಅಗತ್ಯಕ್ಕೆ ಬೇಕಾದಂತೆ ವಸ್ತುಗಳನ್ನು ಪರಿವರ್ತನ ಮಾಡಿದ ಹಲವು ಉದಾಹರಣೆಗಳಿವೆ. ಇಂಡಿಯನ್ ಜುಗಾಡ್ ಹೆಸರಿನಲ್ಲಿ ಹಲವು ಭಾರಿ ವೈರಲ್ ಆಗಿದೆ. ಹಲವು ವಿಡಿಯೋಗಳನ್ನು ಉದ್ಯಮಿ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಇದೀಗ ಆನಂದ್ ಮಹೀಂದ್ರ ಇದೇ ರೀತಿಯ ವಿಡಿಯೋ ಹಂಚಿಕೊಂಡಿದ್ದಾರೆ. ಖಾತಿ ಬೆಡ್ ನೀವು ನೋಡಿರಬಹುದು, ಅಥವಾ ಕೇಳಿಬರವುದು. ರಾಜಸ್ಥಾನ ಸೇರಿದಂತೆ ದೇಶದ ಬಹುತೇಕ ಭಾಗದಲ್ಲಿ ಖಾತ್(ಮಂಚ) ಬೆಡ್ ಬಳಕೆ ಮಾಡುತ್ತಾರೆ. ಇದೀಗ ಇದೇ ಖಾತ್ ಬೆಡ್ ಮೂಲವಾಗಿಟ್ಟುಕೊಂಡು ವಾಹನವೊಂದನ್ನು ತಯಾರಿಸಲಾಗಿದೆ. ಖಾತಿಯಾ ಗಾಡಿ(ಮಂಚದ ಕಾರು) ಎಂಬ ಹೆಸರಿನಲ್ಲಿ ಈ ವಾಹನ ಭಾರತದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಖಾತಿಯಾ ಗಾಡಿ ವೈರಲ್ ಆಗಿದೆ.

ಈಗಾಗಲೇ ಭಾರತದಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ಕೂಟರ್ ಸೇರಿದಂತೆ ಹಲವು ವಾಹನಗಳನ್ನು, ಎಂಜಿನ್‌ಗಳನ್ನು ಪರಿವರ್ತನೆ ಮಾಡಿ ಹೊಸ ವಾಹನವನ್ನಾಗಿ ಬದಲಾಯಿಸಲಾಗಿದೆ. ಆದರೆ ಮಂಚದ ರೀತಿಯಲ್ಲಿ ಒಂದು ವಾಹನ ತಯಾರಿಸಲು ಸಾಧ್ಯವಿದೆ. ಇದನ್ನು ಕಾರ್ಯರೂಪಕ್ಕೆ ಇಳಿಸಲು ಸಾಧ್ಯವಿದೆ ಅನ್ನೋದನ್ನು ಇದೀಗ ಸಾಬೀತುಪಡಿಸಲಾಗಿದೆ. ಈ ಮೂಲಕ ಇನೋವೇಶನ್‌ಗೆ ಗಡಿಗಳಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.