ಶಕ್ತಿ ಯೋಜನೆಯ ಪೂರ್ಣ ಮೊತ್ತ ಬಾಕಿ: ಕೋಟ್ಯಂತರ ರೂ. ನಷ್ಟದಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಇಲ್ಲಿದೆ ಅಂಕಿ -ಅಂಶ

ಬೆಂಗಳೂರು, ಮಾರ್ಚ್​ 12: ಕೆಎಸ್​ಆರ್​ಟಿಸಿ (KSRTC), ಬಿಎಂಟಿಸಿ (BMTC), ಕೆಕೆಆರ್​ಟಿಸಿ (KKRTC) ಮತ್ತು ಎನ್​ಡಬ್ಲೂಕೆಆರ್​ಸಿ (NWKRTC) ನಾಲ್ಕೂ ನಿಗಮಗಳು ಕರ್ನಾಟಕದ ಜನರ ಜೀವನಾಡಿಯಾಗಿವೆ. ನಾಲ್ಕೂ ನಿಗಮಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಿದ್ದಾರೆ. ನಾಲ್ಕೂ ಸಾರಿಗೆ ನಿಗಮಗಳಿಗೆ ಹರಿದು ಬರುತ್ತಿರುವ ಆದಾಯವೆಷ್ಟು? ನಿಗಮಗಳು ಲಾಭದಲ್ಲಿಯವೆಯೇ ಅಥವಾ ನಷ್ಟದಲ್ಲಿವೆಯಾ? ಎಂಬ ಪ್ರಶ್ನೆಗಳು ಜನರಲ್ಲಿವೆ. ಇದೇ ಪ್ರಶ್ನೆಗಳನ್ನು ವಿಧಾನ ಪರಿಷತ್​​ನಲ್ಲಿ ಎಂಎಲ್​ಸಿ ಕೇಶವ ಪ್ರಸಾದ್ ಕೇಳಿದ್ದಾರೆ.

ಎಂಎಲ್​ಸಿ ಕೇಶವ ಪ್ರಸಾದ್ ಪ್ರಶ್ನೆಗೆ, “ಕಳೆದ 5 ವರ್ಷಗಳಲ್ಲಿ ಕೆಎಸ್​ಆರ್​ಟಿಸಿಗೆ 1500 ಕೋಟಿ ರೂ., ಬಿಎಂಟಿಸಿಗೆ 1544 ಕೋಟಿ ರೂ. ಕೆಕೆಆರ್​ಟಿಸಿಗೆ 777 ಕೋಟಿ ರೂ. ಎನ್​ಡಬ್ಲೂಕೆಆರ್​ಟಿಸಿಗೆ 1386 ಕೋಟಿ ರೂ. ನಷ್ಟವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದ್ದಾರೆ.

ಸರ್ಕಾರದಿಂದ ಶಕ್ತಿ ಯೋಜನೆಯ ಪೂರ್ತಿ ಮೊತ್ತ ಪಡೆಯಬೇಕಿದೆ. ಪ್ರಪಂಚದ ಯಾವುದೇ ಭಾಗದಲ್ಲಿಯೂ ಸಾರಿಗೆ ನಿಗಮ ನಷ್ಟದಲ್ಲಿದೆ. ಶೇ 40 ರಷ್ಟು ಬಸ್​ಗಳು ನಷ್ಟದಲ್ಲೇ ಓಡುತ್ತಿವೆ. ಶೇ 30ರಷ್ಟು ಬಸ್​ಗಳು ಯಾವುದೇ ಲಾಭ-ನಷ್ಟ ಇಲ್ಲದೆ ಓಡುತ್ತಿವೆ. ಶೇ 30ರಷ್ಟು ಬಸ್​ಗಳು ಮಾತ್ರ ಲಾಭದಲ್ಲಿವೆ. ಸಾರಿಗೆ ಇಲಾಖೆಯಲ್ಲಿ ಪ್ರತಿದಿನ 9.45 ಕೋಟಿ ರೂ. ಖರ್ಚು ಇದೆ. ಏನಾದರೂ ದೂರುಗಳಿದ್ದರೆ ತಿಳಿಸಿ ಸರಿಪಡಿಸೋಣ ಎಂದು ಪರಿಷತ್​ಗೆ ಹೇಳಿದರು.

ಶಕ್ತಿ ಯೋಜನೆಯಿಂದಾದ ನಷ್ಟ ಎಷ್ಟು ಎಂದು ಎಂಎಲ್​ಸಿ ಕೇಶವ ಪ್ರಸಾದ್ ಮತ್ತೊಂದು ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿದ ಸಚಿವರು, “ಶಕ್ತಿ ಯೋಜನೆಗೆ ಒಟ್ಟು 9,978 ಕೋಟಿ ರೂಪಾಯಿ ಖರ್ಚಾಗಿದೆ. 448 ಬಿಎಂಟಿಸಿ ಬಸ್ ಖರೀದಿ ಮಾಡಿದ್ದೇವೆ. 2016ರ ಬಳಿಕ 10 ಸಾವಿರ ಜನರನ್ನ ನೇಮಕ ಮಾಡಿಕೊಂಡಿದ್ದೇವೆ. ಹೊಸದಾಗಿ 5,360 ಬಸ್ ಖರೀದಿಸಲಾಗಿದೆ. ಬಸ್​ಗಳು ಮೊದಲು 1.40 ಸಾವಿರ ಟ್ರಿಪ್​ ಸಂಚರಿಸುತ್ತಿದ್ದವು. ಈಗ 1.90 ಲಕ್ಷ ಟ್ರಿಪ್ ಪ್ರತಿದಿನ ಸಂಚರಿಸುತ್ತಿವೆ. 40 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗುತ್ತಿದೆ. ಒಂದು ತಿಂಗಳಿಗೆ ಸಿಬ್ಬಂದಿಯಿಂದ 650 ರೂ.‌ ಪಡೆಯಲಾಗುತ್ತಿದೆ. ಸಿಬ್ಬಂದಿಯ ಇಡೀ ಕುಟುಂಬಕ್ಕೆ ಚಿಕಿತ್ಸೆ ನೀಡಲು ಇದು ಸಹಾಯವಾಗಿದೆ” ಎಂದು ಹೇಳಿದರು.

ಹಣ ಬಿಡುಗಡೆ ಪತ್ರ ಬರೆದಿದ್ದ ಎಂಡಿ

ಕಳೆದ ವರ್ಷ 2024ರ ಡಿಸೆಂಬರ್​ನಲ್ಲಿ ಎನ್​ಡಬ್ಲೂಕೆ​ಆರ್​ಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಎಮ್​. ಪ್ರಿಯಾಂಗಾ ಅವರು ಆರ್ಥಿಕ ಇಲಾಖೆಗೆ ಬಾಕಿ ಇರುವ 414 ಕೋಟಿ ರೂ. ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದರು.

ಈ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ್ದ ಎಮ್​. ಪ್ರಿಯಾಂಗಾ ಅವರು, ನಾಲ್ಕೂ ವಿಭಾಗದ ನಿರ್ದೇಶಕ ಮಂಡಳಿಯಲ್ಲೂ ಈ ವಿಚಾರ ಚರ್ಚೆಯಾಗಿದೆ. ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದೇವೆ. ಹಣ ಬಿಡುಗಡೆ ‌ಮಾಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದ್ದರು.

ಅಲ್ಲದೇ, ಎನ್​ಡಬ್ಲೂಕೆ​ಆರ್​ಟಿಸಿಯಲ್ಲಿ ಒಂದು ದಿನಕ್ಕೆ ಸುಮಾರು 25 ಲಕ್ಷ ಜನ ಪ್ರಯಾಣ ಮಾಡುತ್ತಾರೆ. ಇದರಲ್ಲಿ ಸರಾಸರಿ 16 ಲಕ್ಷ ಜನ ಶಕ್ತಿ ಯೋಜನೆ ಫಲಾನುಭವಿಗಳು ಪ್ರಯಾಣ ಮಾಡುತ್ತಾರೆ. ಒಂದು ತಿಂಗಳಿಗೆ 120 ಕೋಟಿ ಶೂನ್ಯ ಟಿಕೆಟ್ ಪ್ರಯಾಣದ ದರವಾಗತ್ತೆ. ಈ‌ ಪೈಕಿ ಸರ್ಕಾರದಿಂದ 102 ಕೋಟಿ ಹಣ ವಾಪಸ್ ಬರುತ್ತಿದೆ. ಬಾಕಿ 414 ಕೋಟಿ ಹಣ ಬರಬೇಕಾಗಿದೆ ಎಂದಿದ್ದರು.