ಗೃಹ ಬಳಕೆದಾರರಿಗೆ ಶಾಕ್: ಸಿಲಿಂಡರ್‌ ಮಿತಿ 9ರಿಂದ 4ಕ್ಕೆ ಕಡಿತ

ನವದೆಹಲಿ:

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುವ ವಾರ್ಷಿಕ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು 9ರಿಂದ 4ಕ್ಕೆ ಕಡಿತಗೊಳಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಜಾಗತಿಕ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯ ಮೇಲಿನ ಒತ್ತಡದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

2016ರಲ್ಲಿ ಉಜ್ವಲ ಯೋಜನೆ ಆರಂಭವಾದಾಗ ಫಲಾನುಭವಿಗಳಿಗೆ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡಲಾಗುತ್ತಿತ್ತು. ಬಳಿಕ ಅದನ್ನು 9ಕ್ಕೆ ಇಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಕಡಿತಗೊಳಿಸಿ 4 ಸಿಲಿಂಡರ್‌ಗಳಿಗೆ ಮಿತಿಗೊಳಿಸಲಾಗಿದೆ. ಆದರೆ, 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ನೀಡಲಾಗುತ್ತಿರುವ 300 ರೂಪಾಯಿ ಸಬ್ಸಿಡಿ ಮುಂದುವರಿಯಲಿದ್ದು, ಈ ಮೊತ್ತ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಇದೀಗ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 942 ರೂಪಾಯಿಗೆ ತಲುಪಿದೆ. ಹೀಗಾಗಿ ಸಬ್ಸಿಡಿ ಕಡಿತಗೊಂಡ ಬಳಿಕ ಉಜ್ವಲ ಯೋಜನೆಯ ಗ್ರಾಹಕರು ಪ್ರತಿ ಸಿಲಿಂಡರ್‌ಗೆ 642 ರೂಪಾಯಿ ಪಾವತಿಸಬೇಕಾಗುತ್ತದೆ.

ಸರ್ಕಾರದ ಸಮೀಕ್ಷೆಯ ಪ್ರಕಾರ, ಉಜ್ವಲ ಯೋಜನೆಯ ಹೆಚ್ಚಿನ ಫಲಾನುಭವಿಗಳು ವರ್ಷಕ್ಕೆ ಸರಾಸರಿ ನಾಲ್ಕು ಸಿಲಿಂಡರ್‌ಗಳಷ್ಟೇ ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಬ್ಸಿಡಿ ಸೌಲಭ್ಯವನ್ನು ನೈಜ ಬಳಕೆಯ ಪ್ರಮಾಣಕ್ಕೆ ಅನುಗುಣವಾಗಿ ಮರುಹೊಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಒಂದು ಎಲ್‌ಪಿಜಿ ಸಿಲಿಂಡರ್‌ ಪೂರೈಕೆಗೆ ಸರ್ಕಾರಕ್ಕೆ 1,600 ರೂಪಾಯಿಗೂ ಹೆಚ್ಚು ವೆಚ್ಚವಾಗುತ್ತಿದ್ದು, ಅದನ್ನು 942 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಿಗೆ ಪ್ರತಿ ಸಿಲಿಂಡರ್ ಮೇಲೆ ಸುಮಾರು 700 ರೂಪಾಯಿ ನಷ್ಟ ಉಂಟಾಗುತ್ತಿದೆ ಎನ್ನಲಾಗಿದೆ.

ತೈಲ ಕಂಪನಿಗಳ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸುವುದು ಹಾಗೂ ಸಬ್ಸಿಡಿ ವೆಚ್ಚವನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.